ಕನ್ನಡ ಬ್ಲಾಗಿಗರ ಕೂಟ
ಕಾಣುವ ಕನಸು ದೊಡ್ಡದಾಗಿರಬೇಕೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಕನಸು 'ಆ
ಕ್ಷಣದ' ಮಟ್ಟಿಗೆ ದೊಡ್ಡದಾಗಿದ್ದದ್ದು ಹೌದು. ಕಂಡದ್ದು 'ಕನ್ನಡ ಬ್ಲಾಗರ್ಸ್ ಮೀಟ್'
ಎಂಬ ಕನಸು.
ಅದು ಮಾರ್ಚ್ ೧೬ರ ಭಾನುವಾರ. ಸಂಜೆ ನಾಲ್ಕು. 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್
ವರ್ಲ್ಡ್ ಕಲ್ಚರ್' ಸಭಾಂಗಣ. ಮಾಮೂಲಿ ವಿಷಯವೊಂದಕ್ಕೆ ವಿಭಿನ್ನವಾದ ಆಯಾಮ ನೀಡಿ ಹೀಗೂ
ಬರೆಯಲಾಗುತ್ತದೆ ಎಂಬ ಸಾಧ್ಯತೆಯನ್ನು ತೋರಿಸಿಕೊಟ್ಟ ಸಾಫ್ಟ್‌ವೇರ್ ಇಂಜಿನಿಯರ್,
ದಿನವೂ ಅವವೇ ವರದಿ ಬರೆದು ಕವನ ಬರೆಯುವುದು ಮರೆತೇ ಹೋಗುವುದೇನೋ ಎಂಬ ಆತಂಕದಿಂದ
ದೂರಾಗಿದ್ದ ಪತ್ರಕರ್ತ, ಮತ್ತೆ ಬರವಣಿಗೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿ... ಹೀಗೆ
ಹೊಸ ಚಿಂತನೆಗಳನ್ನು ತೆರೆದಿಟ್ಟ, ಹಲವಿಧವಾಗಿ ಯೋಚಿಸುವ ಮನಸ್ಸುಗಳು ಒಂದಾಗಿ
'ಪ್ರಣತಿ'ಯ ಕನಸಿಗೆ ಬಣ್ಣ ಹಚ್ಚುತ್ತಿದ್ದವು.
ಕೇವಲ ನೆಟ್‌ಗಳಲ್ಲೇ ನೇತಾಡಿಕೊಂಡಿರುತ್ತಿದ್ದ, ಮೌಸ್‌ನಿಂದಲೇ
ಮಾತನಾಡುತ್ತಿದ್ದ ಕಂಪ್ಯೂಟರ್ ಬೆರಳುಗಳನ್ನು ಒಂದೆಡೆ ಸೇರಿಸಿ ಅವರಲ್ಲಿರುವ ಸಾಹಿತ್ಯಿಕ
ಆಸಕ್ತಿ ಹಂಚಿಕೊಳ್ಳುವ, ಅವರಲ್ಲಿರುವ ಗೊಂದಲಗಳಿಗೆ ಉತ್ತರವಾಗುವ, ಸಾಹಿತ್ಯ ಲೋಕದಲ್ಲಿ
ಬ್ಲಾಗ್‌ಗಳು ಎಬ್ಬಿಸಿರುವ ಹೊಸ ಕ್ರಾಂತಿಗೆ ಒಂದು ರೂಪು ನೀಡುವ ಆಶಯವೇ 'ಪ್ರಣತಿ'
ಈ ಕಾರ್ಯಕ್ರಮ ಆಯೋಜಿಸಲು ಮುಖ್ಯ ಕಾರಣ. ಕಾವ್ಯನಾಮಗಳಲ್ಲಷ್ಟೇ ಪರಿಚಿತರಾಗಿದ್ದವರು
ಯಾಕೆ ಒಮ್ಮೆ ಎದುರಾಗಬಾರದು? ಒಮ್ಮೆ ಮುಖ ನೋಡಿ ಯಾಕೆ 'ಕಮೆಂಟಿಸಬಾರದು' ಎಂಬ ಯೋಚನೆ
ಹುಟ್ಟಿದ್ದೇ ಹೀಗೊಂದು ಭೇಟಿಗೆ ಪ್ರೇರಣೆ.
ಈ 'ಬ್ಲಾಗರ್ಸ್ ಮೀಟ್'ಗೂ ಮೊದಲು 'ಚಿತ್ರಚಾಪ' ಪುಸ್ತಕ ಹೊರತಂದದ್ದು ಸಣ್ಣಗೆ ಧೈರ್ಯ
ನೀಡಿತ್ತು. ಎಲ್ಲಾ ಬ್ಲಾಗಿಗರು ತಮ್ಮದೇ ಕಾರ್ಯಕ್ರಮ ಎಂಬಂತೆ ಲವಲವಿಕೆಯಿಂದ
ಪಾಲ್ಗೊಂಡಿದ್ದರು. ಪ್ರೋತ್ಸಾಹ ಎಂದರೆ ಇದೇ ಅಲ್ಲವೇ? ಟೀಕೆಗಳು ಎಲ್ಲಾ ಕಡೆ ಇರುತ್ತದೆ.
ಆದರೆ ಈ ಪ್ರೋತ್ಸಾಹವಷ್ಟೇ ಸಾಕು ಅವುಗಳನ್ನು ಮರೆಯಲು.
'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್, 'ವಿಶ್ವಕನ್ನಡ'ದ ಯು.ಬಿ. ಪವನಜ, 'ದ್ಯಾಟ್ಸ್
ಕನ್ನಡ'ದ ಎಸ್.ಕೆ. ಶ್ಯಾಮಸುಂದರ್ ಮತ್ತು 'ಸಂಪದ'ದ ಹರಿಪ್ರಸಾದ್ ನಾಡಿಗ್ ಇವರೆಲ್ಲರೂ
ಬ್ಲಾಗ್ ಪ್ರಪಂಚದಲ್ಲಿ ಇಲ್ಲಿಯವರೆಗೆ ಏನಾಗಿದೆ, ಮುಂದೆ ಎಂತಹ ಸುಧಾರಣೆ ತರಲು
ಅವಕಾಶವಿದೆ ಎಂಬುದನ್ನು ಸರಳವಾಗಿ ತಿಳಿಸಿಕೊಟ್ಟರು.
ಅಬ್ದುಲ್ ರಶೀದ್, ಕನ್ನಡ ಸಾಹಿತ್ಯ ಲೋಕಕ್ಕೆ ಬ್ಲಾಗುಗಳು ಹೇಗೆ ಪೂರಕವಾಗಿವೆ
ಎಂಬುದನ್ನು ವಿವರಿಸುವುದರ ಜೊತೆಗೆ, ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಲಷ್ಟೇ
ಬ್ಲಾಗ್ ಇರಬಾರದು., ಹೊಸ ಒಳನೋಟಗಳಿರುವ, ವಿಮರ್ಶಾತ್ಮಕ ಶೈಲಿಯ ಬರಹಗಳು ಬ್ಲಾಗ್
ಪ್ರಪಂಚದಲ್ಲಿ ಕಾಣಿಸಿಕೊಳ್ಳಬೇಕು ಎಂದದ್ದು ಅಕ್ಷರಶಃ ಸತ್ಯಎಂದರು. 'ಭಾವನಾತ್ಮಕ
ಬರವಣಿಗೆಗಳೇ ಹೆಚ್ಚಿನ ಪ್ರಮಾಣದಲ್ಲಿದೆ. ಅವು ಬೇರೆ ಬೇರೆ ರೀತಿಯ ಸಾಹಿತ್ಯ
ಪ್ರಕಾರಗಳನ್ನೂ ರೂಢಿಸಿಕೊಳ್ಳಬೇಕು ಎಂದರು. ಜಾಳುಜಾಳಾದ ಬರಹ ಎಲ್ಲಿಯವರೆಗೆ ಬರಹಗಾರನ
ಕೈಹಿಡಿದೀತು?' ಎಂಬ ಗಂಭೀರ ಪ್ರಶ್ನೆಯನ್ನು ಮುಂದಿಟ್ಟರು.
ಯು.ಬಿ. ಪವನಜ ತಾಂತ್ರಿಕ ಸಮಸ್ಯೆಗಳಿಗೆ ಉತ್ತರವಾದರು. ಕನ್ನಡದ ಮೊದಲ ಅಂತರ್ಜಾಲ
ಪತ್ರಿಕೆ ಆರಂಭಿಸುವಾಗ ಅವರು ಎದುರಿಸಿದ ಸಮಸ್ಯೆಗಳು, ಕ್ರಮೇಣ ಆ ಸಮಸ್ಯೆ ಬಗೆಹರಿದ
ರೀತಿಯನ್ನು ಚಿತ್ರಿಸಿದರು. ಮುಖ್ಯವಾಗಿ ದೈನಂದಿನ ಉಪಯೋಗಕ್ಕೋಸ್ಕರ ಕನ್ನಡವನ್ನು
ಅಂತರ್ಜಾಲ ಕ್ಷೇತ್ರದಲ್ಲಿ ಸಮರ್ಥವಾಗಿ ದುಡಿಸಿಕೊಳ್ಳುವ ದಿಕ್ಕಿನಲ್ಲಿ ಸಾಲುಸಾಲಾಗಿ
ನಿಂತಿರುವ ತಾಂತ್ರಿಕ ಅಡಚಣೆಗಳ ಪಟ್ಟಿ ಮಾಡಿದರು.
ಬ್ಲಾಗ್ ಲೋಕದ ಭಾಷೆ ಕನ್ನಡವಾದರೂ ಆಯುವ ವಿಷಯಗಳು ಜಾಗತಿಕ ಎಂದವರು ಎಸ್.ಕೆ.
ಶ್ಯಾಮಸುಂದರ್. ಇತರ ಮಾಧ್ಯಮಗಳಿಗೆ ಸ್ಪರ್ಧೆ ಒಡ್ಡಬೇಕೆಂದರೆ ಪ್ರಸ್ತುತ ವಿದ್ಯಮಾನಗಳ
ಕಡೆಗೆ ಹೆಚ್ಚು ಗಮನ ನೀಡಬೇಕು ಎಂಬುದು ಅವರ ಅಭಿಮತ. ಅಂದರೆ ಕೇವಲ ಭಾವನಾತ್ಮಕವಾಗಿ
ವಸ್ತುವೊಂದನ್ನು ನೋಡುವುದರ ಜೊತೆಗೆ ವಿಮರ್ಶಾತ್ಮಕ ದೃಷ್ಟಿಕೋನವೂ ಇರಬೇಕು ಎಂಬುದನ್ನು
ಹೇಳಿದಂತಾಯಿತು.
ಹರಿಪ್ರಸಾದ್ ನಾಡಿಗರದು ತಾಂತ್ರಿಕ ವಿವರಣೆ ಮತ್ತು ಅನುಭವದ ಮಾತುಗಳು. ಬ್ಲಾಗುಗಳನ್ನು
ತೆರೆಯುವ ಬಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿ, ಸ್ವಂತ ಅಂತರ್ಜಾಲ ತಾಣ ಆರಂಭಿಸುವುದು
ಹೇಗೆ, ಅದಕ್ಕಾಗುವ ಖರ್ಚು-ವೆಚ್ಚಗಳೇನು, ನಿರ್ವಹಣೆಯ ಲಾಭ-ನಷ್ಟಗಳು, ಇತ್ಯಾದಿ
ವಿಷಯಗಳಳ ಮೇಲೆ ಬೆಳಕು ಚೆಲ್ಲಿದರು. ಆರ್ಕುಟ್ ಮಾದರಿಯ ಸಮುದಾಯ ವೆಬ್‌ಸೈಟ್
ನಿರ್ಮಿಸಲು ಮುಂದಾದರೆ ಎದುರಾಗುವ ಸವಾಲುಗಳೇನು ಎಂಬುದನ್ನು ವಿಷದಪಡಿಸಿದ್ದಲ್ಲದೆ,
ಅಂತರ್ಜಾಲದಲ್ಲಿ ಕನ್ನಡ ಎದುರಿಸುತ್ತಿರುವ ತಾಂತ್ರಿಕ ತೊಂದರೆಗಳನ್ನು ತೊಡೆದು ಹಾಕಿ
ಮುಂದೆ ಸಾಗುವ ಆಶಾಭಾವನೆ ವ್ಯಕ್ತಪಡಿಸಿದರು.
ಅಂದಿನ ಸಭೆ, ಅನೇಕ ಬ್ಲಾಗರುಗಳು ತಮ್ಮ ಬ್ಲಾಗಿಂಗ್ ಅನುಭವಗಳನ್ನು ಹಂಚಿಕೊಳ್ಳಲಿಕ್ಕೂ
ವೇದಿಕೆಯಾಯಿತು. ಗಂಭೀರ ಚರ್ಚೆಗಳು, ಪ್ರಶ್ನೋತ್ತರಗಳು, ಆಗಾಗ ಚಿಮ್ಮುತ್ತಿದ್ದ
ನಗೆಬುಗ್ಗೆ, ಬ್ಲಾಗರುಗಳ ನಡುವಿನ- 'ಓಹ್, ಅದು ನೀವಾ?', 'ನಾನು ನಿಮ್ ಬ್ಲಾಗಿನ
ಫ್ಯಾನು!', 'ಯಾಕೆ ತುಂಬಾ ದಿನದಿಂದ ಏನೂ ಅಪ್‌ಡೇಟ್ ಮಾಡಿಲ್ಲ?' -ಸಂಭಾಷಣೆಗಳ
ನಡುವೆ ಟೀ ಕುಡಿದದ್ದು ತುಂತುರು ಒಟ್ಟಾರೆ ಇವೆಲ್ಲಾ ಹಾಸ್ಯ, ಗಂಭೀರ ಚರ್ಚೆಗಳ ಹದವಾದ
ಮಿಶ್ರಣವಾಗಿತ್ತು ಎನ್ನಬಹುದು.ಮಳೆಯ ಆ ಸಂಜೆಗೆ ಹೊಸ ಕಳೆ ತಂದುಕೊಟ್ಟಿತ್ತು. ಇದಇಷ್ಟೇ
ಅಲ್ಲದೆ ಬೇಳೂರು ಸುದರ್ಶನ್ ಮತ್ತು, ಕಿ.ರಂ. ನಾಗರಾಜ್ ಮುಂತಾದ ಬರಹಗಾರರು ಅವರು
ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡದ್ದು ಭೇಟಿಗೆ'ಪ್ರಪ್ರಥಮ ಅಂತರ್ಜಾಲ ಕನ್ನಡಿಗರ
ಭೇಟಿ'ಗೆ ಕಳೆ ಕಟ್ಟಲು ಮತ್ತೊಂದು ಕಾರಣ.
ಇದು ಇಷ್ಟಕ್ಕೇ ನಿಲ್ಲಬಾರದು; ಯಾರೋ ಕಳುಹಿಸಿದ ಇ-ಮೇಲ್ ಅಥವಾ ಇನ್ಯಾರದೋ
ಎಸ್‌ಎಂಎಸ್‌ನಿಂದಾಗಿ ಬ್ಲಾಗರ್ಸ್ ಮೀಟ್‌ಗೆ ಬಂದೆ ಹೋದೆ
ಎಂದಾಗಬಾರದು. ಸುಮ್ಮನೆ ನಾಲ್ಕು ಜನರನ್ನು ಕೂರಿಸಿ ಭಾಷಣ ಬಿಗಿಸಿದರು; ನಾನು ಕೇಳಿ
ಬಂದೆ ಎಂದಾಗದೆ ಭೇಟಿಯ ಸಮಯದಲ್ಲಿ ಚರ್ಚಿತವಾದ ವಿಷಯಗಳ ಕುರಿತು ಚಿಂತಿಸಿ ಮುಂದೆ ಮತ್ತೆ
ಭೇಟಿಯಾಗಬೇಕು. ಇಂತಹ ಇನ್ನಷ್ಟು ಕಾರ್ಯಕ್ರಮ ನಡೆಯಬೇಕು ಎಂಬುದೇ ನಮ್ಮದು ಪ್ರಣತಿಯ
ಆಶಯ. ನೀವು ಕೈಜೋಡಿಸುತ್ತೀರಿ ಎಂಬ ನಂಬುಗೆ ಇದೆ. . ನಡೆದರೆ, ಕೈಜೋಡಿಸಲು
ಪ್ರಣತಿಯಂತೂ ಮುಂದು!