
ತಮಗನ್ನಿಸಿದ್ದನ್ನು ಬ್ಲಾಗಿನಲ್ಲಿ ಮಾತ್ರ ಬರೆದುಕೊಳ್ಳುತ್ತಿದ್ದ ಐವರು ಹವ್ಯಾಸೀ ಬರಹಗಾರರು ತಮ್ಮ ಬರಹಗಳ ಪುಸ್ತಕವೊಂದನ್ನು ಏಕೆ ಹೊರತರಬಾರದು ಎಂದು ಯೋಚಿಸುತ್ತಿದ್ದರು. ಅದೇ ವೇಳೆ ವಿಜಯಾ ಪ್ರಸನ್ನರವರು ಸಾಹಿತ್ಯ-ಸಂಗೀತ ಬೆಳೆಸುವಾಸೆಯಿಂದ ಒಂದು ಸಂಸ್ಥೆಯನ್ನು ಕಲೆಹಾಕುವ ಯೋಚನೆ ಮಾಡುತ್ತಿದ್ದರು. ಈ ಎರಡೂ ಯೋಚನೆಗಳು ಒಂದಾದಾಗ ಸಾಹಿತ್ಯ-ಸಂಗೀತ ಕ್ಷೇತ್ರಗಳಲ್ಲಿ ಕೆಲಸ ಮಾಡುವ 'ಪ್ರಣತಿ' ಸಂಸ್ಥೆಯನ್ನು ಪ್ರಾರಂಭಿಸಿ, ಆ ಸಂಸ್ಥೆಯ ಮೊದಲ ಪ್ರಸ್ತುತಿಯಾಗಿ 'ಚಿತ್ರಚಾಪ' ಪುಸ್ತಕವನ್ನೂ ಹೊರತರುವ ಯೋಜನೆ ಸಿದ್ಧವಾಯಿತು.
೧೦ ಫೆಬ್ರವರಿ, ೨೦೦೮ - 'ಪ್ರಣತಿ'ಗೆ ಇದೊಂದು ಮಹಾದಿವಸ. ಪ್ರಣತಿ ಸಂಸ್ಥೆಯ ಉದ್ಘಾಟನೆ ಮತ್ತು ಚಿತ್ರಚಾಪ ಪುಸ್ತಕದ ಬಿಡುಗಡೆಯ ದಿವಸ. ಸಂಸ್ಥೆಯನ್ನು ಪ್ರಾರಂಭಿಸಲು ಬೇಕಾದ ಹಲವು ಪೂರ್ವಭಾವೀ ಸಿದ್ಧತೆಗಳನ್ನು ಪ್ರಣತಿ ತಂಡ ಮುಗಿಸಿತ್ತು. ಸಂಸ್ಥೆಯ ಉದ್ಘಾಟನೆಗೆ ಬಂದು, 'ಚಿತ್ರಚಾಪ' ಪುಸ್ತಕದ ಬಿಡುಗಡೆ ನೆರವೇರಿಸಲು ಹಿರಿಯ ಕನ್ನಡ ವಿದ್ವಾಂಸ ಪ್ರೊ|| ಜಿ.ವೆಂಕಟಸುಬ್ಬಯ್ಯ ಅವರನ್ನು ಕೇಳಿಕೊಂಡಾಗ ಸಂತೋಷದಿಂದೊಪ್ಪಿ ಬಂದದ್ದು ನಮಗೂ ಸಂತೋಷವಾಯಿತು. ಹಿಂದೆ ಹೀಗೆ ಯಾವ ಕಾರ್ಯಕ್ರಮವನ್ನೂ ಆಯೋಜಿಸದೇ ಮೊದಲ ಭೀಮಪ್ರಯತ್ನಕ್ಕೆ ಕೈಹಾಕಿದ್ದ ಪ್ರಣತಿ ತಂಡದವರಿಗೆ ಭರ್ತಿಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ ನಿರೀಕ್ಷೆಗೂ ಮೀರಿ ಪ್ರೋತ್ಸಾಹ ನೀಡಿತ್ತು.
ಪ್ರಣತಿಯ ಉದ್ಘಾಟನೆ ವಿಧ್ಯುಕ್ತವಾಗಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, 'ಪ್ರಣತಿ' ಎಂಬ ದೀಪಸ್ಥಂಬಕ್ಕೆ ಬೆಮೆಲ್ ಸಂಸ್ಥೆಯ ನಿರ್ದೇಶಕರಾಗಿದ್ದ ಶ್ರೀ ಎಚ್.ಕೆ.ಶ್ರೀನಿವಾಸಮೂರ್ತಿಯವರು ದೀಪ ಹೊತ್ತಿಸಿದಾಗ ನಮಗೆಲ್ಲರಿಗೂ ಮಹದಾನಂದ! ಈ ಆನಂದಕ್ಕೆ ಗಗನಪರ್ಯಂತ ಪ್ರತಿಧ್ವನಿಸಿದ ಅಲ್ಲಿ ನೆರೆದ ನೂರಾರು ಜನರ ಚಪ್ಪಾಳೆ ಮತ್ತಷ್ಟು ಮೆರಗು ನೀಡಿತ್ತು. ಹಲವು ದಿನಗಳಿಂದ ವಿಜಯಾ ಅವರು ಮನಸ್ಸಿನಲ್ಲೇ ಕಟ್ಟಿಕೊಂಡು ಬಂದಿದ್ದ ಪ್ರಣತಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಸಂಸ್ಥೆಯ ಉದ್ಘಾಟನೆಯಾದ ನಂತರ ಚಿತ್ರಚಾಪದ ಬಿಡುಗಡೆ. ಅರುಣ್, ಶ್ರೀನಿಧಿ, ಸುಶ್ರುತ, ಅನ್ನಪೂರ್ಣ ಮತ್ತು ಶ್ರೀನಿವಾಸ - ಈ ಐವರ ಕವಿತೆ ಮತ್ತು ಲೇಖನಗಳನ್ನೊಳಗೊಂಡ ಪುಸ್ತಕವನ್ನು ಪ್ರೊ|| ಜಿ.ವಿ. ಅವರು ಬಿಡುಗಡೆ ಮಾಡಿದರು. ಪ್ರೊ|| ಜಿ. ವಿ. ಈ ಸಂದರ್ಭದಲ್ಲಿ ಮಾತನಾಡಿ ಪುಸ್ತಕದ ಪ್ರತಿಯೊಂದು ಲೇಖನ ಮತ್ತು ಕಥೆಯನ್ನೂ ತಾವು ಒಂದಲ್ಲ, ಎರಡೆರಡು ಬಾರಿ ಓದಿದ ವಿಷಯ ಹೇಳಿ ತಮ್ಮ ಭಾಷಣದ ನಡುವೆಯೇ ಪುಸ್ತಕದಲ್ಲಿನ ಲೇಖನ ಮತ್ತು ಕವನಗಳ ಕಿರುವಿಮರ್ಶೆ ಮಾಡಿದರು. ಮೊದಲನೆಯ ಬಾರಿಗೆ ತಮ್ಮ ಬರವಣಿಗೆಗಳನ್ನೊಗ್ಗೂಡಿಸಿ ಪುಸ್ತಕವಾಗಿಸಿದ ಐವರಿಗೂ ಬರವಣಿಗೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಬಗ್ಗೆ ಕೆಲವು ಕಿವಿಮಾತುಗಳನ್ನೂ ಹೇಳಿ ಆಶೀರ್ವದಿಸಿದರು.
ಕುಮಾರಿ ರಮ್ಯಾ ಮತ್ತು ಕುಮಾರಿ ಭವ್ಯಾ ಪ್ರಾರ್ಥನೆ ಹೇಳಿದರು. ಶ್ರೀನಿಧಿ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ನಿರ್ವಹಿಸಿದರೆ ಸ್ವಾಗತ ಭಾಷಣವನ್ನು ಅರುಣ್ ಮಾಡಿದರು. ನಮ್ಮ ತಂಡದ ಬಗ್ಗೆ ಶ್ರೀನಿವಾಸ ರಾಜನ್ ಮಾತನಾಡಿದರು. ಸುಶ್ರುತ ದೊಡ್ಡೇರಿ ಪುಸ್ತಕದ ಬಗ್ಗೆ ವಿವರಿಸಿದರೆ, ವಿಜಯಾ 'ಪ್ರಣತಿ' ಸಂಸ್ಥೆಯ ಬಗ್ಗೆ, ಅದರ ಉದ್ದೇಶಗಳ ಬಗ್ಗೆ ಮಾತನಾಡಿದರು. ವಿಜಯಾ ವಂದನಾರ್ಪಣೆಯನ್ನೂ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಎಚ್. ಕೆ. ಶ್ರೀನಿವಾಸ ಮೂರ್ತಿಯವರು ಮತ್ತು ಪ್ರಣತಿ ತಂಡದ ಬೆನ್ನೆಲುಬಾಗಿರುವ ಜನಪ್ರಿಯ ಪ್ರಬಂಧಕಾರ ಶ್ರೀ ವಸುಧೇಂದ್ರ ಅವರೂ ಈ ಹರ್ಷೋತ್ಸವದಲ್ಲಿ ಉಪಸ್ಥಿತರಿದ್ದು ಆಶೀರ್ವದಿಸಿದ್ದು ಇಡಿಯ ಪ್ರಣತಿ ತಂಡಕ್ಕೆ ಸಂತೋಷ ನೀಡಿತು. ಉದ್ಘಾಟನೆ ಮತ್ತು ಪುಸ್ತಕದ ಬಿಡುಗಡೆಯ ನಂತರ ವಿದುಷಿ ಎಚ್.ಕೆ. ಬಾಲಸರಸ್ವತಿಯವರ ವೀಣಾವಾದನವಿತ್ತು. ಸುಮಾರು ಒಂದು ತಾಸಿನ ವೀಣಾವಾದನ ಅಲ್ಲಿ ನೆರೆದವರ ಮನಸ್ಸುಗಳಿಗೆ ಮುದ ನೀಡಿತು.
ಈಗೀಗ ಸಾಹಿತ್ಯ ಕ್ಷೇತ್ರದಲ್ಲಿ ಕಣ್ಬಿಟ್ಟ ತಂಡ ನಮ್ಮದು. ಕಲಿಯುವುದು, ಮಾಡುವುದು ಬೇಕಾದಷ್ಟಿದೆ. ಆದರೂ ಈ ಮೊದಲ ಪ್ರಯತ್ನ ನಮಗೆಲ್ಲಾ ಸಂತೋಷ ನೀಡಿದೆ. ಈ ಕಾರ್ಯ ಸಾಧ್ಯವಾಗಿಸಿದ ಕನ್ನಡಕ್ಕೂ, ಕನ್ನಡಾಭಿಮಾನಿಗಳಿಗೂ ನಮ್ಮ ತಂಡ ಋಣಿ.
ಚಿತ್ರಚಾಪ - ಪ್ರಕೃತಿಗೊಂದು ಕೃತಿ
ಚಿತ್ರಚಾಪ ಪ್ರಣತಿ ತಂಡದ ಬಣ್ಣ-ಬಣ್ಣದ ಕನಸುಗಳ ನಡುವೆ ಮೂಡಿ ಬಂದ ಕಾಮನಬಿಲ್ಲು. ನಮ್ಮ ತಂಡದವರೆಲ್ಲರಿಗೂ ಬಿಡುವಿನ ಸಮಯದಲ್ಲಿ ಪ್ರಕೃತಿಯ ಹಲವು ಸೊಬಗುಗಳನ್ನು ಹುಡುಕಿಕೊಂಡು ಕಾಡು-ಮೇಡು ತಿರುಗುವ ಹವ್ಯಾಸ. ತಿರುಗಾಡುವಾಗ ಪ್ರಕೃತಿಯಲ್ಲಿ ಹಲವು ದೃಶ್ಯಗಳು, ವೈಚಿತ್ರಗಳು, ಕುತೂಹಲಕಾರಿ ಅಂಶಗಳು... ಹೀಗೇ, ಅನೇಕ ರೀತಿಯ ಅನುಭವಗಳು ನಮ್ಮದಾಗಿರುತ್ತದೆ. ಇವುಗಳ ಬಗ್ಗೆ ಬರೆದಿರುವ ಲೇಖನಗಳ ಹೊತ್ತಿಗೆ ಚಿತ್ರಚಾಪ. ಪ್ರಕೃತಿಯ ಒಡನಾಟ ನಮಗೆ ಹಲವು ವಿಷಯಗಳನ್ನು ಕಲಿಸಿರುತ್ತದೆ. ಅಂತಹ ವಿಷಯಗಳನ್ನೂ ಕೆಲವು ಲೇಖನಗಳಲ್ಲಿ ಓದುಗರ ಜೊತೆ ಹಂಚಿಕೊಳ್ಳುತ್ತಾರೆ. ರಾಘವೇಂದ್ರ ಹೆಗಡೆಯವರ ಸುಂದರ ರೇಖಾಚಿತ್ರಗಳು ಪುಸ್ತಕದ ಸೊಬಗು ಹೆಚ್ಚಿಸುತ್ತವೆ. ಪ್ರಕೃತಿಯ ವಿದ್ಯಾರ್ಥಿಗಳಾದ ನಮ್ಮ ಪ್ರಕೃತಿಯ ಕಡೆಗಿನ ಒಲವು ಪ್ರಣತಿಯ ಮೊದಲ ಕೃತಿಯನ್ನು ಪ್ರಕೃತಿಯ ಬಗ್ಗೆಯೇ ಬರೆದು ಪ್ರಕೃತಿಗೇ ಅರ್ಪಿಸಲು ನಮ್ಮನ್ನು ಪ್ರೇರೇಪಿಸಿತು.
