ನುಡಿವ ವೀಣೆ
ಆಗಸ್ಟ್ ಎರಡನೆಯ ತಾರೀಖು ಶನಿವಾರ ಸಂಜೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್
ವರ್ಲ್ಡ್ ಕಲ್ಚರ್ ನಲ್ಲಿ ಒಂದು ಅಪೂರ್ವವಾದ ಕಾರ್ಯಕ್ರಮವನ್ನು ಪ್ರಣತಿ ಸಂಸ್ಥೆ
ಆಯೋಜಿಸಿತ್ತು. "ನುಡಿವ ವೀಣೆ" ಎಂಬ ನಾಮಾಂಕಿತದ ಈ ವೀಣಾ ವಾದನ ಕಾರ್ಯಕ್ರಮವು ಕರ್ನಾಟಕ
ಶಾಸ್ತ್ರೀಯ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರಿಗೆ ಮತ್ತು ಶರಣ-ದಾಸವರೇಣ್ಯರಿಗೆ
ನುಡಿನಮನ ಸಲ್ಲಿಸುವ ಕಾರ್ಯಕ್ರಮವಾಗಿತ್ತು. ಪ್ರಸಿದ್ಧ ವಾಗ್ಗೇಯಕಾರರ
ಸಂಕ್ಷಿಪ್ತ ವಿವರ, ಮತ್ತು ನುಡಿಸಲ್ಪಡುವ ಪ್ರತಿಯೊಂದು ಕೃತಿಯ ರಾಗ, ಲಕ್ಷಣ ಮತ್ತು
ವೈಶಿಷ್ಟ್ಯದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದು ನುಡಿನಮನದ ಕಳೆಯನ್ನು ಹೆಚ್ಚಿಸಿತು.
ತಮ್ಮ ಅತ್ಯದ್ಭುತ, ಅತಿಮಧುರ ವೀಣಾವಾದನದಿಂದ ವೈಣಿಕ ವಿದುಷಿ ಎಚ್.ಕೆ.ಬಾಲಸರಸ್ವತಿ
ಸಭೆಯನ್ನು ಮಂತ್ರಮುಗ್ಧಗೊಳಿಸಿದರು. ಮೃದಂಗದಲ್ಲಿ ಡಾ||ಎಚ್.ಎಸ್.ವೆಂಕಟೇಶ್ ಹಾಗೂ
ಖಂಜಿರದಲ್ಲಿ ಶ್ರೀಯುತ ಭಾರ್ಗವ ರವರು ಅತ್ಯುತ್ತಮ ಸಾಥ್ ನೀಡಿದರು.ಲತಾಂಗಿ ರಾಗದ ಕೃತಿಯ
ಲಾಲಿತ್ಯಮಯ ವಾದನದಿಂದ ಆರಂಭವಾದ ಕಾರ್ಯಕ್ರಮ, ಶ್ಯಾಮಾಶಾಸ್ತ್ರಿ ವಿರಚಿತ ಭೈರವಿ ರಾಗದ
ವಿಶೇಷ ಸ್ವರಜತಿಯೊಂದಿಗೆ ಕಳೆಗಟ್ಟಲಾರಂಭಿಸಿತು.ಮುತ್ತಯ್ಯ ಭಾಗವತರ "ನಿರೋಷ್ಟಕ"
ಕೃತಿಯಾದ ಪುತ್ರಿಕಾ ರಾಗದ "ರಾಜ ರಾಜ ರಾಜಿತೆ" ಯ ಬಗ್ಗೆ ಸಭೆಗೆ
ಪರಿಚಯವಿದ್ದಂತಿರಲಿಲ್ಲ. ಅದರ ಮನಮೋಹಕ ವಾದನ ಸಭಿಕರ ಮನಸೂರೆಗೊಂಡಿತು.ತ್ಯಾಗರಾಜರ "ರಾಮ
ನನ್ನು ಬ್ರೋವರ" ಭಕ್ತಿರಸದ ಹೊಳೆಯಲ್ಲಿ ಮುಳುಗಿಸಿದರೆ,ಧನಶ್ರೀ ತಿಲ್ಲಾನ
ಎಲ್ಲರನ್ನೂ ನ್ತಲೆದೂಗುವಂತೆ ಮಾಡಿತು. ಪುರಂದರ ದಾಸ, ಬಸವಣ್ಣ, ಭಾರತಿಯಾರ್ ಅವರ
ಕೃತಿಗಳು ತತ್ವಾದರ್ಶಗಳ ಪರಿಚಯ ಮಾಡಿಸಿತು.
ಶನಿವಾರ ಸಂಜೆಯ ಸಮಯ ಇದಕ್ಕಿಂತ ಅರ್ಥಪೂರ್ಣವಾಗಿ ಉಪಯೋಗವಾಗಲು ಸಾಧ್ಯವೇ ಇಲ್ಲವ
ೆಂದು ಕೇಳುಗರು ಹರ್ಷ ವ್ಯಕ್ತಪಡಿಸಿದರು.